ಭಾನುವಾರ, ಜುಲೈ 3, 2022

108 ಉಪನಿಷತ್ತು

108 ಉಪನಿಷತ್ತು… ನಿಮಗೆಷ್ಟು ಗೊತ್ತು?


ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಇಲ್ಲಿ 108 ಉಪನಿಷತ್ತುಗಳ ಹೆಸರನ್ನೂ ಅವು ಯಾವ ವೇದದ ಭಾಗವಾಗಿದೆ ಎಂಬುದನ್ನೂ ನೀಡಲಾಗಿದೆ…


ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ ‘ಉಪನಿಷತ್’ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ಕೆಲವು ಪದಕೋಶಗಳು “ಗೂಢ ತತ್ವಗಳನ್ನುಳ್ಳ” ಮತ್ತು “ರಹಸ್ಯವಾದ ಸಿದ್ಧಾಂತ” ಎಂಬ ಅರ್ಥಗಳನ್ನು ಕೊಟ್ಟಿವೆ.

ಬಹುತೇಕವಾಗಿ ಉಪನಿಷತ್ತುಗಳ ಸಂಖ್ಯೆ 108 ಎಂದು ಹೇಳಲಾಗುತ್ತದೆ. ಅವುಗಳಲ್ಲಿ; ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ – ಇವು 13 ಪ್ರಧಾನ ಉಪನಿಷತ್ತುಗಳು.

ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಯಾವ ಉಪನಿಷತ್ತು ಯಾವ ವೇದದ ಭಾಗವಾಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ :

1. ಈಶಾವಾಸ್ಯೋಪನಿಷತ್= ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್

2. ಕೇನೋಪನಿಷತ್= ಸಾಮವೇದಃ, ಮುಖ್ಯ ಉಪನಿಷತ್

3. ಕಠೋಪನಿಷತ್= ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್

4. ಪ್ರಶ್ನೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್

5. ಮುಂಡಕೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್

6. ಮಾಂಡೂಕ್ಯೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್

7. ತೈತ್ತಿರೀಯೋಪನಿಷತ್= ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್

8. ಐತರೇಯೋಪನಿಷತ್= ಋಗ್ವೇದಃ, ಮುಖ್ಯ ಉಪನಿಷತ್

9. ಛಾಂದೋಗ್ಯೋಪನಿಷತ್= ಸಾಮವೇದಃ, ಮುಖ್ಯ ಉಪನಿಷತ್

10. ಬೃಹದಾರಣ್ಯಕೋಪನಿಷತ್= ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್

11. ಬ್ರಹ್ಮ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

12. ಕೈವಲ್ಯ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

13. ಜಾಬಾಲ ಉಪನಿಷತ್(ಯಜುರ್ವೇದ) = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

14. ಶ್ವೇತಾಶ್ವತರೋಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

15. ಹಂಸ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್

16. ಆರುಣೇಯ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

17. ಗರ್ಭ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

18. ನಾರಾಯಣ ಉಪನಿಷತ್= ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್

19. ಪರಮಹಂಸ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

20. ಅಮೃತ ಬಿನ್ದೂಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

21. ಅಮೃತ ನಾದೋಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

22. ಅಥರ್ವ ಶಿರೋಪನಿಷತ್= ಅಥರ್ವವೇದಃ, ಶೈವ ಉಪನಿಷತ್

23. ಅಥರ್ವ ಶಿಖೋಪನಿಷತ್=ಅಥರ್ವವೇದಃ, ಶೈವ ಉಪನಿಷತ್

24. ಮೈತ್ರಾಯಣಿ ಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

25. ಕೌಷೀತಕಿ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್

26. ಬೃಹಜ್ಜಾಬಾಲ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

27. ನೃಸಿಂಹತಾಪನೀ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

28. ಕಾಲಾಗ್ನಿರುದ್ರ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

29. ಮೈತ್ರೇಯಿ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

30. ಸುಬಾಲ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

31. ಕ್ಷುರಿಕ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

32. ಮಾನ್ತ್ರಿಕ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

33. ಸರ್ವ ಸಾರೋಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

34. ನಿರಾಲಮ್ಬ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

35. ಶುಕ ರಹಸ್ಯ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

36. ವಜ್ರಸೂಚಿ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

37. ತೇಜೋ ಬಿನ್ದು ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

38. ನಾದ ಬಿನ್ದು ಉಪನಿಷತ್= ಋಗ್ವೇದಃ, ಯೋಗ ಉಪನಿಷತ್

39. ಧ್ಯಾನಬಿನ್ದು ಉ ಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

40. ಬ್ರಹ್ಮವಿದ್ಯಾ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

41. ಯೋಗತತ್ತ್ವ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

42. ಆತ್ಮಬೋಧ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್

43. ಪರಿವ್ರಾತ್ ಉಪನಿಷತ್(ನಾರದಪರಿವ್ರಾಜಕ) = ಅಥರ್ವವೇದಃ, ಸಂನ್ಯಾಸ ಉಪನಿಷತ್

44. ತ್ರಿಷಿಖಿ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್

45. ಸೀತಾ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

46. ಯೋಗಚೂಡಾಮಣಿ ಉಪನಿಷತ್= ಸಾಮವೇದಃ, ಯೋಗ ಉಪನಿಷತ್

47. ನಿರ್ವಾಣ ಉಪನಿಷತ್= ಋಗ್ವೇದಃ, ಸಂನ್ಯಾಸ ಉಪನಿಷತ್

48. ಮಣ್ಡಲಬ್ರಾಹ್ಮಣ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್

49. ದಕ್ಷಿಣಾಮೂರ್ತಿ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

50. ಶರಭ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

51. ಸ್ಕನ್ದ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

52. ಮಹಾನಾರಾಯಣ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

53. ಅದ್ವಯತಾರಕ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

54. ರಾಮರಹಸ್ಯ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

55. ರಾಮತಾಪಣಿ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

56. ವಾಸುದೇವ ಉಪನಿಷತ್= ಸಾಮವೇದಃ, ವೈಷ್ಣವ ಉಪನಿಷತ್

57. ಮುದ್ಗಲ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್

58. ಶಾಣ್ಡಿಲ್ಯ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್

59. ಪೈಂಗಲ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

60. ಭಿಕ್ಷುಕ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

61. ಮಹತ್ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

62. ಶಾರೀರಕ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

63. ಯೋಗಶಿಖಾ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

64. ತುರೀಯಾತೀತ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

65. ಸಂನ್ಯಾಸ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

66. ಪರಮಹಂಸ ಪರಿವ್ರಾಜಕ ಉಪನಿಷತ್= ಅಥರ್ವವೇದಃ, ಸಂನ್ಯಾಸ ಉಪನಿಷತ್

67. ಅಕ್ಷಮಾಲಿಕ ಉಪನಿಷತ್= ಋಗ್ವೇದಃ, ಶೈವ ಉಪನಿಷತ್

68. ಅವ್ಯಕ್ತ ಉಪನಿಷತ್= ಸಾಮವೇದಃ, ವೈಷ್ಣವ ಉಪನಿಷತ್

69. ಏಕಾಕ್ಷರ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

70. ಅನ್ನಪೂರ್ಣ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

71. ಸೂರ್ಯ ಉಪನಿಷತ್= ಅಥರ್ವವೇದಃ, ಸಾಮಾನ್ಯ ಉಪನಿಷತ್

72. ಅಕ್ಷಿ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

73. ಅಧ್ಯಾತ್ಮಾ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

74. ಕುಣ್ಡಿಕ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

75. ಸಾವಿತ್ರೀ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

76. ಆತ್ಮಾ ಉಪನಿಷತ್= ಅಥರ್ವವೇದಃ, ಸಾಮಾನ್ಯ ಉಪನಿಷತ್

77. ಪಾಶುಪತ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್

78. ಪರಬ್ರಹ್ಮ ಉಪನಿಷತ್= ಅಥರ್ವವೇದಃ, ಸಂನ್ಯಾಸ ಉಪನಿಷತ್

79. ಅವಧೂತ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

80. ತ್ರಿಪುರಾತಪನಿ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

81. ದೇವಿ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

82. ತ್ರಿಪುರ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್

83. ಕಠರುದ್ರ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

84. ಭಾವನ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

85. ರುದ್ರ ಹೃದಯ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

86. ಯೋಗ ಕುಣ್ಡಲಿನಿ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

87. ಭಸ್ಮ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

88. ರುದ್ರಾಕ್ಷ ಉಪನಿಷತ್= ಸಾಮವೇದಃ, ಶೈವ ಉಪನಿಷತ್

89. ಗಣಪತಿ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

90. ದರ್ಶನ ಉಪನಿಷತ್= ಸಾಮವೇದಃ, ಯೋಗ ಉಪನಿಷತ್

91. ತಾರಸಾರ ಉಪನಿಷತ್= ಶುಕ್ಲಯಜುರ್ವೇದಃ, ವೈಷ್ಣವ ಉಪನಿಷತ್

92. ಮಹಾವಾಕ್ಯ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್

93. ಪಞ್ಚ ಬ್ರಹ್ಮ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

94. ಪ್ರಾಣಾಗ್ನಿ ಹೋತ್ರ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

95. ಗೋಪಾಲ ತಪಣಿ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

96. ಕೃಷ್ಣ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

97. ಯಾಜ್ಞವಲ್ಕ್ಯ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

98. ವರಾಹ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

99. ಶಾತ್ಯಾಯನಿ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

100. ಹಯಗ್ರೀವ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

101. ದತ್ತಾತ್ರೇಯ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

102. ಗಾರುಡ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

103. ಕಲಿ ಸಂಚಾರಣ ಉಪನಿಷತ್= ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್

104. ಜಾಬಾಲ ಉಪನಿಷತ್  = ಸಾಮವೇದಃ, ಶೈವ ಉಪನಿಷತ್

105. ಸೌಭಾಗ್ಯ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್

106. ಸರಸ್ವತೀ ರಹಸ್ಯ ಉಪನಿಷತ್= ಕೃಷ್ಣಯಜುರ್ವೇದಃ, ಶಾಕ್ತ ಉಪನಿಷತ್

107. ಬಹ್ವೃಚ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್

108. ಮುಕ್ತಿಕ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

ಸರ್ವಜನ ಸುಖಿನೋಭವಂತು.,,ಹಾಗೂ ಅಯುತ ಮಹಾಚಂಡೀಯಾಗದ ಕೆಲವು ತುಣುಕು ಗಳು

ಭಾನುವಾರ, ಮೇ 15, 2022

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಕವನ ರೂಪ

 ಇಂದು ಹುಣ್ಣಿಮೆ ಪ್ರಯುಕ್ತ ಸತ್ಯ ನಾರಾಯಣ ಕಥನ


ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ

_______________________________________________


ಶ್ರೀ ಸತ್ಯನಾರಾಯಣ ವ್ರತ ನಮ್ಮ ಜನರ ಬದುಕಿನಲ್ಲಿ ಸಾಮಾನ್ಯವಾಗಿಬಿಟ್ಟಿರುವ ಒಂದು ಪೂಜಾ ವಿಧಾನ. ಅದರ ಭಾಗವಾಗಿರುವ ಕಥೆಯ ಪಾರಾಯಣ ಮಾಡುವುದು ಒಂದು ಪ್ರಮುಖ ಪೂಜಾಂಗ. ಅದನ್ನು ಕಥಾ ರೂಪದ ಬದಲು ಕಾವ್ಯ ರೂಪದಲ್ಲಿ ಹಿಡಿಯುವ ಯತ್ನ ಮಾಡಿದ್ದೇನೆ – ಸಂಕ್ಷಿಪ್ತ ರೂಪದಲ್ಲಿ. ಪ್ರತಿ ನಿತ್ಯ ಅಥವ ತಿಂಗಳು ತಿಂಗಳೂ ಪೂಜಿಸುವಂತವರಿಗೆ ಇದು ಸಮಯದ ದೃಷ್ಟಿಯಿಂದ ಉಪಯೋಗವಾದೀತೆಂಬ ಆಶಯ.

___________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಕವನ ರೂಪದಲ್ಲಿ ಈ ಕೆಳಗಿದೆ

_________________________________


ಹಿನ್ನಲೆ

_________________________________


ಭಗವಾನ್ ಕೃಷ್ಣನ ಮಾತೆ ಹೇಳಿಹ ನುಡಿ ಭಗವದ್ಗೀತೆ

ನನ್ನವತಾರಾ ಕಾರಣ ಅರಿತವಗಿಲ್ಲ ಮರುಜನ್ಮ ಚಿಂತೆ

ಭಕ್ತ ಕೋಟಿ ಮಹಾತ್ಮರು ಮಹಿಮೆ ಲೀಲೆ ಹಾಡುವಂತೆ

ಶ್ರದ್ದೆ ಭಕ್ತಿಯಲಿ ವ್ರತಮಾಡೆ, ಮುಕ್ತಿ ಗಳಿಸುತೆ ನಿಶ್ಚಿಂತೆ || ೦೦ ||


ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ

ಕೇಳದಿರೆ ನಷ್ಟ, ಕೇಳೆ ಭಗವನ್ನಾಮಸ್ಮರಣೆಯೆ ಅನುದಿನ

ಮಹಾತ್ಮರಂತೆ ಮುಕ್ತಿ ಮಾರ್ಗಕೆ, ನಡೆಯೇ ದಿವ್ಯ ಪಥದೆ

ಮಾಡೆ ಸಾಕು ನೇಮ ನಿಷ್ಠೆಯಲಿ, ಸರ್ವ ಸಂಪದ ತಪ್ಪದೆ || ೦೦ ||


__________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೧

__________________________________


ಶ್ರೀ ಸತ್ಯನಾರಾಯಣ ಕಥೆಯಿಹ ರೇವಾ ಕಾಂಡ

ಸೂತಪುರಾಣಿಕ ವಿರಚಿತ ಸ್ಕಂದಪುರಾಣದಿಂದ

ನೈಮಿಶಾರಣ್ಯದಿ ಶೌನಕರ ಸಹಸ್ರ ವರ್ಷ ಯಜ್ಞ

ಜತೆ ಋಷಿಗಳಿಗ್ಹೇಳಿ ಪುಣ್ಯಕಥೆ ಲೋಕ ಕಲ್ಯಾಣಾ || ೦೧ ||


ಸಂಸಾರದಿಹಜಗದ ಚಿಂತೆ ತೊರೆದವರಾ ಬಳಗ

ಶೌನಕಾದಿಮುನಿ ಕೇಳೆ ಸೂತ ಪುರಾಣೀಕರನಾಗ

‘ಕಾಮನೆ ಬಯಕೆ ಮನುಕುಲ ಸಹಜವೀ ಪ್ರವೃತ್ತಿ

ಯಾವ ಪೂಜೆ,ವ್ರತ,ತಪ ಕೊಡಬಲ್ಲವು ಸರಿಮುಕ್ತಿ ?’ || ೦೨ ||


ಸಂತಸದೀ ಋಷಿವರ, ಮನುಕುಲದೇಳಿಗೆ ವಿಚಾರ

ಸಂಸಾರಾ ತ್ಯಜಿತರ ನಿಸ್ವಾರ್ಥ ಪ್ರಶ್ನೆ ಜನ ಹಿತಕರ

ದೇವರ್ಷಿ ನಾರದ ನಾರಾಯಣನಿಗೆ ಕೇಳಿದ ಮಾತೆ

ನಾ ಪೇಳುವೆ ನಿಮಗೆ ಕೇಳಿ ಪುನೀತರಾಗಿರಿ ಚರಿತೆ || ೦೩ ||


ತ್ರಿಲೋಕ ಸಂಚಾರಿ ಭೂಲೋಕ ಸುತ್ತಾಟದಿ ಖೇದ

ಮನುಜ ನರಳಿ ಅಜ್ಞಾನ ಜನ್ಮಾಂತರ ಕರ್ಮ ಬಂಧ

ಕೊನೆಯಿರದಾ ದುಃಖ ಪರಿಹಾರ ದಾರಿಯನ್ಹುಡುಕೆ

ಸರ ಸರನೆ ವೈಕುಂಠಕೆ ಶ್ರೀಹರಿಗಿಡುತಲಾ ತೊಡಕೆ || ೦೪ ||


ವೈಕುಂಠದೀ ಶೇಷತಲ್ಪಾಸೀನ ನಾರಾಯಣ ವದನ

ನೋಡುತಲೆ ಮರೆತೆಲ್ಲ ನಾರದ ಮಾಡೇ ಗುಣಗಾನ

ನಸುಸಕ್ಕ ಶ್ರೀಹರಿ, ವಿಷಯವಿತ್ತೆ ತ್ರಿಲೋಕಸಂಚಾರಿ ?

ಮಮ್ಮಲ ಮರುಗೀ ಮನ, ಭೂಜನಕಿಲ್ಲವೆ ರಹದಾರಿ ? || ೦೫ ||


ಆಜನ್ಮ ಬ್ರಹ್ಮಚಾರಿ ಯಾಕಿಲ್ಲ ಪರಿಹಾರಕಿದೆ ದಾರಿ

ಕರ್ಮಕಾಂಡಾವೃತ್ತ ಹುಲುಮಾನವನರಿಯದ ಪರಿ

ಆದರೂ ನಿನ ಮಾತು ಸತ್ಯ, ಲೋಕಕಲ್ಯಾಣಕೆ ನಿತ್ಯ

ಈ ಪೂಜಾರಹಸ್ಯವನರಿಸುವೆ ತೀರಲಿ ಆಸಕ್ತರಗತ್ಯ || ೦೬ ||


ಭೂಲೋಕ ವಾಸಿಗಳಿಗೆ ಶ್ರೀ ಸತ್ಯನಾರಾಯಣ ವ್ರತ

ವರ್ಣಾತೀತ ಉಚ್ಛ ನೀಚ ಭೇಧವಿಲ್ಲದೆ ಸರ್ವ-ಜನತ

ತಾವಾಗುತಾ ಭಕ್ತ-ಪುರೋಹಿತ ನೇರ ಸಂವಹಿಸುತ

ಶ್ರೀಮನ್ನಾರಾಯಣ ಕರುಣೆ ಐಹಿಕಸುಖ ಮೋಕ್ಷದತ್ತ || ೦೭ ||


ಹೇಳಯ್ಯ ಶ್ರೀಹರಿ, ವ್ರತ ನಿಯಮ ಪೂಜಾ ವಿಧಾನ

ಅರಿಯಲಿ ಭಕುತಜನ ಮಾಡಬೇಕೇನೇನು ಪ್ರಧಾನ

ನೇರ ಸರಳ ನಾರದ, ಯಾವ ಸಂಜೆಯಾದರು ಸಿದ್ದ

ಕೆಳೆ ಬಂಧು ಭಾಂದವರೊಡನಿರೆ, ನಂಬಿಕೆ ಭಕ್ತಿ ಶುದ್ಧ || ೦೮ ||


ಮಾಡೆ ಸಾಕು ಪ್ರಸಾದ, ಹಾಲು ಬಾಳೆ ಸಕ್ಕರೆ ತುಪ್ಪ

ಸಮ ಪ್ರಮಾಣದಲಿ ಕಾಯಿಸುತ, ಬೆರೆಸಿದ ಸಮರ್ಪ

ಹಾಡಿ ಹೊಗಳುತ ಭಕ್ತಿಭಜನೆಯಾ ಸುಶ್ರಾವ್ಯದಿರುಳು

ಕಥೆ ಕೇಳಿ ಹಂಚಿ ಪ್ರಸಾದ ಗೌರವದಲಿ ಬೀಳ್ಕೊಡಲು || ೦೯ ||


ಸ್ಥಿತಿ ನಿಯಾಮಕನಿತ್ತ ಪೂಜಾಕ್ರಮ ನಾರದ ಸಂಪ್ರೀತ

ಸರಳ ವ್ರತವದರಲ್ಲಿ ಗಮನ, ಭಕ್ತಿ ಭಜನೆ ಕಥೆಗಳತ್ತ

ಆಲಿಸಲು ಬಯಸಿದ ಯೋಗಿಯಾಸೆಗೆ ನಾರಾಯಣ

ಭಾಗ ವಿಶೇಷಗಳಾಗಿ ಬಿತ್ತರಿಸಿದ ಖಂಡದಲಿಹ ಕಥನ || ೧೦ ||


(ಮುಕ್ತಾಯ : ಅಧ್ಯಾಯ ೦೧)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೨

________________________________________


ಕೇಳಯ್ಯ ನಾರದ, ವೃದ್ಧ ಕಾಶಿ ಬಡ ಬ್ರಾಹ್ಮಣನ ಕಥೆ

ಸಕಲ ಸದ್ಗುಣ ಸಂಪನ್ನ ಐಶ್ವರ್ಯಹೀನ ಭಿಕ್ಷೆಯೆ ಸ್ವತ್ತೆ

ವಿಪ್ರೋತ್ತಮನ ಪರೀಕ್ಷೆಗೆ ವಿಪ್ರಪ್ರಿಯನಾ ಮಾರುವೇಷ

ಭಕ್ತಿ ಪಥದಲಿಹರೆಲ್ಲ ವಿಪ್ರರೆ, ಹರಿಯಾ ಕರುಣಾಪಾಶ || ೧೧ ||


ಬ್ರಾಹ್ಮಣ ವೇಷದಿ ವಿಪ್ರೋತ್ತಮನ ಬಳಿ ಬಂದಾ ದೇವ

ಗೆಳೆಯ ಹೇಳಯ್ಯಾ, ನಿನದೇನಿದೇ ಪರಿತಾಪ ನೋವ

ಕಡುಬಡವ ವಯಸಾಗಿದೆ, ಕಾಡುವ ಬಡತನ ಬವಣೆ

ಬಿಟ್ಟು ಹೋಗದೀ ಶಾಪವ ತೊಲಗಿಸುವ ಹಾದಿ ಕಾಣೆ || ೧೨ ||


ನಕ್ಕ ಪರಮಾತ್ಮ, ಶ್ರೀ ಸತ್ಯನಾರಾಯಣ ವ್ರತವಿಹುದು

ಮಾಡಿ ನೋಡೊಮ್ಮೆ ನಿನ್ನ, ಸಂಕಷ್ಟಗಳೆಲ್ಲಾ ಹರಿವುದು

ಎಂದುಸುರಿದ ಭಗವಂತ ವ್ರತ ಕ್ರಮ ನಿಯಮಾ ಸೂಕ್ತ

ಇರುಳಿನ ನಿದ್ರೆ ಕನಸಲೂ, ಆ ಚಿಂತೆಯಲೆ ಮಲಗುತ || ೧೩ ||


ಬಾರದ ನಿದ್ರೆಯಲುರುಳಾಡುತ ವಿಪ್ರೋತ್ತಮ ನುಡಿದ

ನಾಳಿನ ಭಿಕ್ಷಾಟನೆ ಗಳಿಸಿದ್ದೆಲ್ಲದಿ ವ್ರತ ನಡೆಸಲು ಸಿದ್ದ

ಲೌಕಿಕದೈಶ್ವರ್ಯಕೊಲಿಯದ ದೇವ, ಭಾವಕೆ ಸಂತೃಪ್ತ

ಭಿಕ್ಷೆಯಲೆ ಮಳೆ ಸುರಿಸಿದ, ವ್ರತಕಿಲ್ಲದ ಹಣದಾ ಕುತ್ತ || ೧೪ ||


ಕೊಂಡು ತಂದ ವ್ರತ ದ್ರವ್ಯ, ಸಾಂಗೋಪದ ಪೂಜೆ ಭವ್ಯ

ನೋಡು ನೋಡುತೇ ಭಲಾ, ಬಡತನ ದಾರಿದ್ರ ಮಾಯ

ಸಂತಸಕೆಣೆಯೆಲ್ಲಿ ಭಾಗ್ಯಕೆ, ಪ್ರತಿ ತಿಂಗಳು ಮಾಡಿ ವ್ರತ

ಪರಮಸುಖ ಸಂತಸ ಜತೆಗೆ, ಮೋಕ್ಷ ಪಡೆದೆ ಸುಖಾಂತ || ೧೫ ||


ಆಲಿಸುತ ಧ್ಯಾನನಿರತ ಶೌನಕಾದಿ ಮುನಿಗಣ ಪುನೀತ

ಕೇಳಲು ಸೂತಪುರಾಣಿಕರ, ಜಗದಿ ಪಸರಿಸಿತ್ಹೇಗೀವ್ರತ

ಪರಿಪಾಲಿಸಿದವರಿಗೆಲ್ಲಾ, ಸಿಕ್ಕಿತೇನೇನು ಭಾಗ್ಯ ಸುಕೃತ

ಸೂತರಿತ್ತರು ವಿವರ, ವಿಪ್ರನಾ ಕಥೆಯಲೆ ಉತ್ತರಿಸುತ್ತ || ೧೬ ||


ವ್ರತನಿರತ ಬ್ರಾಹ್ಮಣ ಗೃಹಕದೊಂದು ದಿನ ಕಟ್ಟಿಗೆಯವ

ಪೂಜಾ ವೈಭವ ಸಂಭ್ರಮಕೆ, ಚಕಿತನಾಗಿ ಕೇಳಿದ ಜಾವ

ಏನೀ ಪೂಜಾ ವ್ರತ ಸ್ವಾಮಿ, ಯಾವುದೀ ಹಣ್ಣೂ ಹಂಫಲ ?

ಮಾಡಿಹೇ ಸತ್ಯನಾರಾಯಣ ವ್ರತ, ಫಲಿತವೀ ಸಂಪತ್ತೆಲ್ಲ || ೧೭ ||


ಯಾರೂ ಮಾಡಬಹುದಾದ ಪೂಜೆ, ಸರಳ ದೈವಿಕ ಶ್ರದ್ಧೆ

ಮನದಾಶೆ ಕಾಮನೆಯೆಲ್ಲ, ಪೂರೈಸೆ ಭಗವಂತನ ಮದ್ದೆ

ನನ್ನ ಬಡತನವೆಲ್ಲ ಮಾಯ, ಲಭಿಸಿ ವ್ರತದಿಂದಾದಾಯ

ಸೇವಿಸು ನೀ ಪ್ರಸಾದ, ಫಲ ಸಿಗಲಿ ನಿನಗು ಪುಣ್ಯಕಾರ್ಯ || ೧೮ ||


ಮರ ಕಡಿವಾ ಮನದೊಳಗೆ, ಕಡಿಯುತ ಚಿಂತನೆಗೆ ಸೌದೆ

ನಾಳಿನ ಸಂಪಾದನೆಯಲ್ಲೆ ನಾ ಮಾಡಿಬಿಡುವೆ ವ್ರತ ಶ್ರದ್ದೆ

ಎಂದವನಾ ಕಟ್ಟಿಗೆ ವ್ಯಾಪಾರವಂದಾಯ್ತು ಭರ ಪೂರದಲಿ

ವ್ರತಪೂಜಾ ಸಲಕರಣೆಯೆಲ್ಲ, ತರಲು ಬಂದ ಲಾಭದಲಿ || ೧೯ ||


ಬಂಧು-ಬಳಗ ನೆಂಟರಿಷ್ಟರೆಲ್ಲರ, ಆಹ್ವಾನಿಸಿ ಪೂಜಾವ್ರತ

ಪೂಜಿಸೆ ಸಾಧಾರಣ ಸೌದೆ ಕಡಿವವಗು, ತಾ ಒಲಿಯುತ

ಕರುಣಿಸಿದನು ಐಶ್ವರ್ಯ, ಸಂಪತ್ಭೋಗದ ಸಿರಿ ಸುರಿಮಳೆ

ಭಕ್ತಿ ವ್ರತನಿರತನಿಗನುಗ್ರಹಿಸಿ,ಸತ್ಯ ಲೋಕಕೊಯ್ದ ಕಹಳೆ || ೨೦ ||


(ಮುಕ್ತಾಯ : ಅಧ್ಯಾಯ ೦೨)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


___________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೩

___________________________________


ಮುಂದುವರೆಸುತ ಸೂತರು ರಾಜನ ಕಥೆ ಉಲ್ಕಮುಖ

ಸತ್ಯವ್ರತ ಪ್ರಜ್ಞಾವಂತ ದಯಾಳು ದೀನದಲಿತ ಸೇವಕ

ಅಸೀಮ ಭಕ್ತ ದಿನಂಪ್ರತಿ ಗುಡಿ ಗೋಪುರ ದೇವಾಲಯ

ಭಗವಂತನಾರಾಧನೆಗೆ ಬಡವಗೆ ದಾನ ಧರ್ಮ ಕಾರ್ಯ || ೨೧ ||


ಅಂತೊಂದು ದಿನ ನದಿ ತೀರದಿ ಸತ್ಯನಾರಾಯಣವ್ರತ

ಮಾಡಿರುವ ಹೊತ್ತಲೆ ಬರಲೊಬ್ಬ ವರ್ತಕ ಶ್ರೇಷ್ಠ ಚಕಿತ

ಕೇಳಲೇನಿದು ಪೂಜಾವ್ರತ, ಏನಿಹುದದು ಪೂಜಾಫಲ

ವಿನಮ್ರದಲೆ ಪೇಳಲು ರಾಜ, ವ್ರತ ನಿಯಮದ ಸರಳ || ೨೨ ||


ನಾ ನಡೆಸಿಹನಯ್ಯಾ ಈ ವ್ರತ ಸಿರಿ ಸಂಪದ ಭಾಗ್ಯಕೆ

ನಿನ್ನ ಹಡಗಂತೆ ಸಮೃದ್ಧ ರಾಜ್ಯವಾಗಿರಲೆಂಬ ಬಯಕೆ

ಶ್ರಿಮನ್ನಾರಾಯಣನಾ ವಿಷ್ಣುವನು ಓಲೈಸುವ ವಿಧಾನ

ಬಯಸಿದ್ದೆಲವ ಒಲಿದರೆ, ಕರುಣಿಸಿ ಮಾಡೇ ಪ್ರಧಾನ || ೨೩ ||


ವರ್ತಕ ಶ್ರೇಷ್ಠಿ ಕುತೂಹಲ, ಕೇಳಲೆ ಪೂಜಾ ವಿಧಾನ

ಸಿರಿಸಂಪದವಿದ್ದೇನು ಫಲ, ಮಕ್ಕಳಿಲ್ಲದೆ ಕೊರಗಿಹನ

ದಯಮಾಡಿ ತಿಳಿಸಯ್ಯಾ ರಾಜ, ಬೇಕಾದ್ದೆಲ್ಲಾ ವಿವರ

ರಾಜನಿತ್ತ ಹರ್ಷದಲೆ, ಪಡೆದು ವರ್ತಕ ಸೇರಿದನೂರ || ೨೪ ||


ಮನೆಯೊಡತಿ ಲೀಲಾವತಿಗ್ಹೇಳುತ ವ್ರತಪೂಜಾಸಾರ

ಮಕ್ಕಳಾಗಲಿ ಮಾಡುವ ಸತ್ಯನಾರಾಯಣವ್ರತ ಪೂರ

ಅನತಿ ಕಾಲದೆ ಗರ್ಭಿಣಿ ಲೀಲಾವತಿ ಹೆತ್ತು ಕಲಾವತಿ

ಪ್ರಾಯಕೆ ಬಂದರೂ ಪೂಜೆಯ ಮರೆತು ಬಿಟ್ಟ ಸಂಗತಿ || ೨೫ ||


ಚಿಂತೇ ಬಿಡು ಲೀಲಾವತಿ, ವ್ರತ ಮಾಡಿ ಮದುವೆ ಜತೆ

ತೀರಿಸಿ ಬಿಡುವ ಹರಕೇ ಬಾಕಿ, ಎಂದವನಾ ಕಕ್ಕುಲತೆ

ಮದುವೆ ನಡೆದೇ ಹೋಯ್ತೆ, ವ್ರತವೇಕೊ ಮರೆತೋಯ್ತೆ

ಭಕ್ತಪ್ರಿಯ ನಾರಾಯಣನೆ, ನೆನಪಿಸಲು ಬರಬೇಕಾಯ್ತೆ || ೨೬ ||


ರತ್ನಸಾರ ಪಟ್ಟಣದಲಿ ರಾಜ್ಯವನಾಳುತ ಚಂದ್ರಕೇತು

ಅಳಿಯನ ಜತೆ ವರ್ತಕ ವ್ಯಾಪಾರಕೆ ಬಂದಿಳಿದಹೊತ್ತು

ಅರಮನೆಯಲಿ ಕದ್ದ ದ್ರವ್ಯ ಹೊತ್ತೋಡಿದ ಕಳ್ಳರ ಬೆನ್ನು

ಹಿಡಿದೋಡಿದ ರಾಜಭಟರ ತಪ್ಪಿಸಿಕೊಳ್ಳಲೆಸೆದ ಹೊನ್ನು || ೨೭ ||


ಮರದ ನೆರಳಡಿ ವಿಶ್ರಮಿಸಿರೆ ವರ್ತಕನೊಡನೆ ಅಳಿಯ

ಬಿತ್ತಲ್ಲ ಕದ್ದೆಸೆದ ಗಂಟು, ಪಕ್ಕದಲೆ ಗ್ರಹಚಾರ ಸಮಯ

ಪರದೇಶಿಗಳ ಕಥೆ ಪ್ರವರ, ಕೇಳುವವರಲ್ಲ ರಾಜಭಟರು

ಕದ್ದ ಮಾಲಿನ ಜತೆಗೆ, ಹೊತ್ತೊಯ್ದು ಸೆರೆಗ್ಹಾಕಿ ಮರೆತರು || ೨೮ ||


ನೆನಸಿಕೊಂಡ ವ್ಯಾಪಾರಿ, ವ್ರತ ಮರೆತೆ ಕಾಡಿಹ ಶ್ರೀಹರಿ

ಕಳ್ಳತನದಿ ಬೀದಿಪಾಲು, ಲೀಲಾವತಿ ಕಲಾವತಿ ಕಮರಿ

ಭಿಕ್ಷೆಯಲಲೆಯುತ ಕಲಾವತಿ ಕಂಡು ನಾರಾಯಣ ವ್ರತ

ತಾಯಿಗ್ಹೇಳಲೆ ವೃತ್ತಾಂತ ಮರೆತಿದ್ದ ವ್ರತದ ನೆನಪಾಯ್ತ || ೨೯ ||


ಮರುದಿನವೆ ಕರೆಯುತ ಬಂಧು ಬಳಗದ ಜತೆಯೆ ವ್ರತ

ಗಲ್ಲ ಬಡಿಯುತ ಕ್ಷಮೆ ಕೇಳುತೆ, ರಾಜನಿಗೆ ಕನಸು ಬಿತ್ತ

ತಪ್ಪರಿವಾಗಿ ವಿಚಾರಿಸೆ, ವರ್ತಕನ ಬಿಡುಗಡೆಗೊಳಿಸುತೆ

ತಪ್ಪಿನ ಬದಲಿಗಪಾರ, ಸಂಪತ್ತ ಹೊರೆ ಹೊರಿಸಿ ಘನತೆ || ೩೦ ||


(ಮುಕ್ತಾಯ : ಅಧ್ಯಾಯ ೦೩)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೪

________________________________________


ಮುಂದೇನಾಯ್ತೆನಲೆ ಮುನಿಜನ, ಸೂತರೇಳುತ ಕಥನ

ಬಿಡುಗಡೆಯಾದ ಸಂತಸ, ಹಡಗನೇರಿದರಿಬ್ಬರೆ ಜತನ

ಊರ ಬಾಗಿಲಿನ್ಹೊರಗೆ, ಬಂದು ತಲುಪಿದವರ ಪರೀಕ್ಷೆಗೆ

ಬಂದನೆ ಸನ್ಯಾಸಿ ರೂಪದೆ, ಏನಿದೆ ಕೇಳಲ್ಹಡಗಿನೊಳಗೆ || ೩೧ ||


ಬಿಟ್ಟರೂ ಬಿಡದ ಮಾಯೆ, ವರ್ತಕನನು ಬಿಡದ ನೋವೆ

ಅನೃತವನಾಡಿಸಿತು ನಾಲಿಗೆ, ತರಗೆಲೆ ತುಂಬಿದ ನಾವೆ

ನಸುನಕ್ಕ ಭಗವಂತ, ತಥಾಸ್ತು ಎನುತ ನಡೆದ ಸಮಯ

ಎದೆಯೊಡೆದೆ ಪ್ರಜ್ಞಾಶೂನ್ಯ, ವರ್ತಕನಿಗರಿವಾಗಿ ನ್ಯಾಯ || ೩೨ ||


ಓಡಿದ ನಾಗಾಲೋಟ ಸನ್ಯಾಸಿಯ ಊರೆಲ್ಲ ಹುಡುಕುತ

ಕಾಲಿಗೆ ಬಿದ್ದವನೆ, ಕ್ಷಮಿಸಯ್ಯಾ ನನ್ನ ಮೂಢತನ ಧೂರ್ತ

ಕರುಣಾಮಯ ಶ್ರೀಹರಿ, ಕ್ಷಮಿಸಿದನು ಕನಿಕರವಾ ತೋರಿ

ನಿರಾಳದೆ ಮರಳಿದ ವರ್ತಕ, ಸತಿಗೆ ಕಳಿಸೆ ಸುದ್ದಿಸವಾರಿ || ೩೩ |


ಶ್ರೀಸತ್ಯನಾರಾಯಣವ್ರತ ನಿರತೆ, ಕಾಯದ ಸಹನೆ ಕುತ್ತೆ

ಪೂಜೆ ಮುಗಿಸಲು ಕಲಾವತಿಗ್ಹೇಳಿ, ಓಡುತ ಪತಿಗರಸುತೆ

ಗಂಡನನು ಕಾಣುವ ತವಕ, ಅವಸರದಲಿ ಮುಗಿಸಿ ಪೂಜೆ

ಸ್ವೀಕರಿಸದೆ ಪೂಜಾ ಪ್ರಸಾದ, ಓಡಿದಳೆ ಕಲಾವತಿ ಸಹಜೆ || ೩೪ ||


ಬಂದು ನೋಡಿದರಲ್ಲಿ, ಕಾಣದ ನಾವೆ ಪತಿಯ ಸುಳಿವೆಲ್ಲಿ

ಹಾಕಿದ ಲಂಗರೆ ನಾಪತ್ತೆ ಮುಳುಗಿತ್ತೆ ಪತಿಯ ಜತೆಯಲ್ಲಿ

ಬಿಕ್ಕಿ ಆತ್ಮಾಹುತಿಗೆಣೆ ಕಲಾವತಿ, ವರ್ತಕ ಚಿಂತಿತ ಪೂರ್ತಿ

ನಡೆದಿರಬೇಕೇನೊ ತಪ್ಪು, ಮನ ಹುಡುಕಿರೆ ಕಾರಣ ಸರತಿ || ೩೫ ||


ಚಿಂತೆಯ ನಡುವಲೆ ಅಲ್ಲೆ, ವ್ರತ ಮಾಡಲ್ಹೊರಟಾ ವರ್ತಕ

ಅರಿತೊ ಅರಿಯದೆ ಮಾಡಿದ, ತಪ್ಪೆಲ್ಲ ಕ್ಷಮಿಸು ಪ್ರವರ್ತಕ

ವಿಧ ವಿಧದಲಿ ಪ್ರಾರ್ಥನೆ, ಮೊರೆಯಿಡುತಾ ಆರಾಧಿಸಲು

ಭಗವಂತನ ಕರುಣೆಗೆ ಮತ್ತೆ, ಅರಿವಾಯ್ತು ತಪ್ಪಿನ ತಿರುಳು || ೩೬ ||


ಸ್ವೀಕರಿಸಲಿ ಪ್ರಸಾದ ಮೊದಲು, ಪರಿಹಾರವಾಗಿ ದೋಷ

ಸರಿಯಾಗುವುದೆಲ್ಲ ಮತ್ತೆ, ನಾರಾಯಣನೆನಲು ಸುಹರ್ಷ

ವ್ರತ ಪೂಜಾಗೃಹಕೆ ಓಡಿದಳೆ, ಕಲಾವತಿ ಭರದಿ ಪ್ರಸಾದ

ಸ್ವೀಕರಿಸುತ ಪೊಡಮಟ್ಟಲು, ಶ್ರೀಹರಿ ಪರಿಹರಿಸಿ ವಿಷಾದ || ೩೭ ||


ನಿಜ ಭಕ್ತಿಯಲಿ ಎರಗಿ ಸುಕೋಮಲೆ, ಶ್ರೀಹರಿ ಕೃಪೆಮಾಲೆ

ಕಳುವಾದ ಪತಿಯು ಹಿಂದಿರುಗಿರಲೆ, ನಾರಾಯಣ ಲೀಲೆ

ಸಂತಸ ಭರದಲಿ ವೃದ್ಧಿ, ಭಗವಂತನ ಮೇಲಣ ಭಯಭಕ್ತಿ

ಸುಖಸಂತೋಷವ ಹೊಂದೆ, ಜೀವನವಿಡಿ ವ್ರತಮಾಡಿ ಶಕ್ತಿ || ೩೮ ||


ಆಂತು ಮಂಗಳಕರವಾಗೆ, ಲೀಲಾವತಿ ಕಲಾವತಿ ಪ್ರವರ

ಅಲಕ್ಷಿಸದೆ ಮಾಡೆ ಶ್ರೀಸತ್ಯನಾರಾಯಣ ವ್ರತ ಪರಿಹಾರ

ಕಷ್ಟ ನಷ್ಟಗಳೆಲ್ಲಾ ಕರಗಿ, ಸುಖಸಂತೋಷ ಸಮೃದ್ಧಿಯಲೆ

ಪಡೆಯಲು ಕೈವಲ್ಯ ಮುಕ್ತಿ, ಐಹಿಕ ಜೀವನ ಕಳೆದಮೇಲೆ || ೩೯ ||


(ಮುಕ್ತಾಯ: ಅಧ್ಯಾಯ – ೦೪)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೫

________________________________________


ನೇಮಿಷಾರಣ್ಯ ಕಾನನದಿ ಸೂತರು ಮುಂದುವರೆಸುತಲಿ

ಶೌನಕಾದಿ ಮುನಿಗಳಿಗೆ ಅರುಹೆ, ಐದನೆ ಅಧ್ಯಾಯದಲಿ

ಬಲು ಮುಖ್ಯವೀ ಭಾಗದ ಕಥೆ, ನಾವಾಗಬಾರದು ಅಂತೆ

ಕೇಳಿ ಧನ್ಯರಾಗುವ ಸರದಿ, ಶ್ರೀಮನ್ನಾರಾಯಣ ಭಕ್ತಿ ಕಥೆ || ೪೦ ||


ಪೂರ್ವದಲಿ ರಾಜ್ಯವಾಳುತ, ಅಂಗಧ್ವಜನೆಂಬೊಬ್ಬ ರಾಜ

ಸರ್ವೋತ್ತಮ, ಸತ್ಯ ನಿಷ್ಠುರ ಪರಿಪಾಲಿಸುತಿರಲೆ ಸಹಜ

ಯಾರನು ಬಿಟ್ಟೀತೊ ಮಾಯೆ, ಸತ್ಯನಾರಾಯಣ ವ್ರತದ

ಅಲಕ್ಷಿಸಲೊಮ್ಮೆ ಪ್ರಸಾದ, ಸಂಕಷ್ಟಗಳ ಬಾಗಿಲಾ ತೆರೆದ || ೪೧ ||


ಬೇಟೆಯಾಡುತ ಕಾಡಿನಲಿ, ವನ್ಯಮೃಗಗಳ ಬೆನ್ನಟ್ಟುತಲಿ

ದಣಿದ ರಾಜ ವಿಶ್ರಮಿಸೆ, ಕೂಡೆ ಮರದ ನೆರಳೊಂದರಲಿ

ಅನತಿ ದೂರದಲೆ ಆಡಿಕೊಂಡಿದ್ದ ಬಾಲರ ಕಲರವದಲಿ

ಆಡಿದ್ದರಾಟ ಸತ್ಯನಾರಾಯಣ ಪೂಜೆ ಮಾಡೆ ಆಟದಲಿ || ೪೨ ||


ತುಂಡು ರೊಟ್ಟಿ ಹೊರತು, ಬೇರೇನಿಲ್ಲ ಕಿರಿಯರ ಬಳಗ

ಆರಿಸಿಕೊಂಡರು ತಮ್ಮಲೊಬ್ಬನಿಗಿತ್ತೆ ಪುರೋಹಿತ ಜಾಗ

ದನ ಕಾಯುವವರ ಬುತ್ತಿ, ಆಟದಲೆ ಸಹಜ ಬಾಲಭಕ್ತಿ

ತೋಚಿದಂತೆ ಮಾಡಿರಲು ಪೂಜೆ, ಸತ್ಯನಾರಾಯಣಶಕ್ತಿ || ೪೩ ||


ಅಟದ ಪೂಜೆಯಲಿ ನೈವೇದ್ಯ, ಬುತ್ತಿಯನೆ ಅರ್ಪಿಸಿದ

ದನಗಾಹಿ ಬಾಲರು ರಾಜನಿಗರ್ಪಿಸಲು ವ್ರತ ಪ್ರಸಾದ

ಹಮ್ಮು, ಬಿಗುಮಾನ, ಗರ್ವ ಕಾಡಿರಲು ಮಲಿನಾ ಮನ

ಮುಟ್ಟದೆ ನಡೆದನೆ ಪ್ರಸಾದ, ಆಗದಿಹುದೇ ಪ್ರತಿಫಲನ ?|| ೪೪ ||


ನೋಡು ನೋಡುತೆ ಅಂಗಧ್ವಜ, ಕಳುವಾಗಿ ಹೋಯ್ತೆಲ್ಲ

ಕಳೆದುಕೊಂಡ ಐಶ್ವರ್ಯದ ಜತೆಗೆ, ನೂರು ಮಕ್ಕಳಿನ್ನಿಲ್ಲ

ಆಲೋಚಿಸುತ ಸಜ್ಜನ ರಾಜ, ಅರಿತ ಪ್ರಸಾದದ ಶಾಪ

ನಿರ್ಲಕ್ಷಿಸಿದ ಪಾಪವೆ, ಕಾಡಿದೆ ಈ ತರದಲಿ ನಿಜರೂಪ || ೪೫ ||


ತಡಮಾಡದೆ ಅಂಗಧ್ವಜ, ಹೊರಟ ದನಗಾಹಿ ತಾಣಕೆ

ಸೇರಿಸಲದೆ ಬಾಲರ, ಮಾಡಿ ವ್ರತ ಶ್ರದ್ದಾ ಭಕ್ತಿ ಬೆಳಕೆ

ಮನ್ನಿಸಿದ ಶ್ರೀಹರಿ, ಮತ್ತೆ ಕರುಣಿಸುತ ಕಳೆದ ಸಂಪತ್ತು

ಇನ್ನಿಲ್ಲವಾದ ಬಂಧುಗಳೆಲ್ಲಾ ಮತ್ತೆ ಕೈ ಸೇರಿದ ಹೊತ್ತು || ೪೬ ||


ಸೂತರೆಂದರು ಕಥೆ ಮುಗಿಸುತ, ಕಲಿಯುಗಕಿದು ಸೂಕ್ತ

ವಿಶೇಷ ಶಕ್ತಿಯಿಹ ಈ ವ್ರತ, ಕರುಣಿಸಬಲ್ಲ ಅಪರಿಮಿತ

ಪವಿತ್ರ ಪುನೀತ ದೇವರ ದೇವನ, ಹೆಸರಾಗಿಹ ಅನಂತ

ಈಶ್ವರ, ಸತ್ಯದೇವ, ನಾರಾಯಣಾದಿ ರೂಪದ ಅದ್ವೈತ || ೪೭ ||


ಅವತರಿಸಿಹ ಹಲವವತಾರ, ಬಗೆ ರೂಪಗಳಲಿ ಒಬ್ಬನೆ

ಈ ಕಥೆ ಕೇಳಿ ಓದಿದೆಲ್ಲರಿಗು, ಸನ್ಮಂಗಳವ ತೋರುವನೆ

ಪರಿಹರಿಸುವನವರೆಲ್ಲರ ದುಃಖ ಸಂಕಷ್ಟಗಳ ಸರಮಾಲೆ

ಶ್ರೀ ಸತ್ಯನಾರಾಯಣ ವ್ರತದೆ, ಇಹಪರ ಸುಖ ಮುಟ್ಟಲೆ || ೪೮ ||


(ಮುಕ್ತಾಯ: ಅಧ್ಯಾಯ – ೦೫)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

___________________

ಕಾವ್ಯರೂಪ : ನಾಗೇಶ ಮೈಸೂರು


▬▬▬ஜ۩۞۩ஜ▬▬▬*▬▬▬ஜ۩۞۩ஜ▬▬

    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು

         ಸರ್ವಜನಾಃ ಸುಖಿನೋಭವತು 

▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬