ಇಂದು ಹುಣ್ಣಿಮೆ ಪ್ರಯುಕ್ತ ಸತ್ಯ ನಾರಾಯಣ ಕಥನ
ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ
_______________________________________________
ಶ್ರೀ ಸತ್ಯನಾರಾಯಣ ವ್ರತ ನಮ್ಮ ಜನರ ಬದುಕಿನಲ್ಲಿ ಸಾಮಾನ್ಯವಾಗಿಬಿಟ್ಟಿರುವ ಒಂದು ಪೂಜಾ ವಿಧಾನ. ಅದರ ಭಾಗವಾಗಿರುವ ಕಥೆಯ ಪಾರಾಯಣ ಮಾಡುವುದು ಒಂದು ಪ್ರಮುಖ ಪೂಜಾಂಗ. ಅದನ್ನು ಕಥಾ ರೂಪದ ಬದಲು ಕಾವ್ಯ ರೂಪದಲ್ಲಿ ಹಿಡಿಯುವ ಯತ್ನ ಮಾಡಿದ್ದೇನೆ – ಸಂಕ್ಷಿಪ್ತ ರೂಪದಲ್ಲಿ. ಪ್ರತಿ ನಿತ್ಯ ಅಥವ ತಿಂಗಳು ತಿಂಗಳೂ ಪೂಜಿಸುವಂತವರಿಗೆ ಇದು ಸಮಯದ ದೃಷ್ಟಿಯಿಂದ ಉಪಯೋಗವಾದೀತೆಂಬ ಆಶಯ.
___________________________________
ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಕವನ ರೂಪದಲ್ಲಿ ಈ ಕೆಳಗಿದೆ
_________________________________
ಹಿನ್ನಲೆ
_________________________________
ಭಗವಾನ್ ಕೃಷ್ಣನ ಮಾತೆ ಹೇಳಿಹ ನುಡಿ ಭಗವದ್ಗೀತೆ
ನನ್ನವತಾರಾ ಕಾರಣ ಅರಿತವಗಿಲ್ಲ ಮರುಜನ್ಮ ಚಿಂತೆ
ಭಕ್ತ ಕೋಟಿ ಮಹಾತ್ಮರು ಮಹಿಮೆ ಲೀಲೆ ಹಾಡುವಂತೆ
ಶ್ರದ್ದೆ ಭಕ್ತಿಯಲಿ ವ್ರತಮಾಡೆ, ಮುಕ್ತಿ ಗಳಿಸುತೆ ನಿಶ್ಚಿಂತೆ || ೦೦ ||
ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ
ಕೇಳದಿರೆ ನಷ್ಟ, ಕೇಳೆ ಭಗವನ್ನಾಮಸ್ಮರಣೆಯೆ ಅನುದಿನ
ಮಹಾತ್ಮರಂತೆ ಮುಕ್ತಿ ಮಾರ್ಗಕೆ, ನಡೆಯೇ ದಿವ್ಯ ಪಥದೆ
ಮಾಡೆ ಸಾಕು ನೇಮ ನಿಷ್ಠೆಯಲಿ, ಸರ್ವ ಸಂಪದ ತಪ್ಪದೆ || ೦೦ ||
__________________________________
ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೧
__________________________________
ಶ್ರೀ ಸತ್ಯನಾರಾಯಣ ಕಥೆಯಿಹ ರೇವಾ ಕಾಂಡ
ಸೂತಪುರಾಣಿಕ ವಿರಚಿತ ಸ್ಕಂದಪುರಾಣದಿಂದ
ನೈಮಿಶಾರಣ್ಯದಿ ಶೌನಕರ ಸಹಸ್ರ ವರ್ಷ ಯಜ್ಞ
ಜತೆ ಋಷಿಗಳಿಗ್ಹೇಳಿ ಪುಣ್ಯಕಥೆ ಲೋಕ ಕಲ್ಯಾಣಾ || ೦೧ ||
ಸಂಸಾರದಿಹಜಗದ ಚಿಂತೆ ತೊರೆದವರಾ ಬಳಗ
ಶೌನಕಾದಿಮುನಿ ಕೇಳೆ ಸೂತ ಪುರಾಣೀಕರನಾಗ
‘ಕಾಮನೆ ಬಯಕೆ ಮನುಕುಲ ಸಹಜವೀ ಪ್ರವೃತ್ತಿ
ಯಾವ ಪೂಜೆ,ವ್ರತ,ತಪ ಕೊಡಬಲ್ಲವು ಸರಿಮುಕ್ತಿ ?’ || ೦೨ ||
ಸಂತಸದೀ ಋಷಿವರ, ಮನುಕುಲದೇಳಿಗೆ ವಿಚಾರ
ಸಂಸಾರಾ ತ್ಯಜಿತರ ನಿಸ್ವಾರ್ಥ ಪ್ರಶ್ನೆ ಜನ ಹಿತಕರ
ದೇವರ್ಷಿ ನಾರದ ನಾರಾಯಣನಿಗೆ ಕೇಳಿದ ಮಾತೆ
ನಾ ಪೇಳುವೆ ನಿಮಗೆ ಕೇಳಿ ಪುನೀತರಾಗಿರಿ ಚರಿತೆ || ೦೩ ||
ತ್ರಿಲೋಕ ಸಂಚಾರಿ ಭೂಲೋಕ ಸುತ್ತಾಟದಿ ಖೇದ
ಮನುಜ ನರಳಿ ಅಜ್ಞಾನ ಜನ್ಮಾಂತರ ಕರ್ಮ ಬಂಧ
ಕೊನೆಯಿರದಾ ದುಃಖ ಪರಿಹಾರ ದಾರಿಯನ್ಹುಡುಕೆ
ಸರ ಸರನೆ ವೈಕುಂಠಕೆ ಶ್ರೀಹರಿಗಿಡುತಲಾ ತೊಡಕೆ || ೦೪ ||
ವೈಕುಂಠದೀ ಶೇಷತಲ್ಪಾಸೀನ ನಾರಾಯಣ ವದನ
ನೋಡುತಲೆ ಮರೆತೆಲ್ಲ ನಾರದ ಮಾಡೇ ಗುಣಗಾನ
ನಸುಸಕ್ಕ ಶ್ರೀಹರಿ, ವಿಷಯವಿತ್ತೆ ತ್ರಿಲೋಕಸಂಚಾರಿ ?
ಮಮ್ಮಲ ಮರುಗೀ ಮನ, ಭೂಜನಕಿಲ್ಲವೆ ರಹದಾರಿ ? || ೦೫ ||
ಆಜನ್ಮ ಬ್ರಹ್ಮಚಾರಿ ಯಾಕಿಲ್ಲ ಪರಿಹಾರಕಿದೆ ದಾರಿ
ಕರ್ಮಕಾಂಡಾವೃತ್ತ ಹುಲುಮಾನವನರಿಯದ ಪರಿ
ಆದರೂ ನಿನ ಮಾತು ಸತ್ಯ, ಲೋಕಕಲ್ಯಾಣಕೆ ನಿತ್ಯ
ಈ ಪೂಜಾರಹಸ್ಯವನರಿಸುವೆ ತೀರಲಿ ಆಸಕ್ತರಗತ್ಯ || ೦೬ ||
ಭೂಲೋಕ ವಾಸಿಗಳಿಗೆ ಶ್ರೀ ಸತ್ಯನಾರಾಯಣ ವ್ರತ
ವರ್ಣಾತೀತ ಉಚ್ಛ ನೀಚ ಭೇಧವಿಲ್ಲದೆ ಸರ್ವ-ಜನತ
ತಾವಾಗುತಾ ಭಕ್ತ-ಪುರೋಹಿತ ನೇರ ಸಂವಹಿಸುತ
ಶ್ರೀಮನ್ನಾರಾಯಣ ಕರುಣೆ ಐಹಿಕಸುಖ ಮೋಕ್ಷದತ್ತ || ೦೭ ||
ಹೇಳಯ್ಯ ಶ್ರೀಹರಿ, ವ್ರತ ನಿಯಮ ಪೂಜಾ ವಿಧಾನ
ಅರಿಯಲಿ ಭಕುತಜನ ಮಾಡಬೇಕೇನೇನು ಪ್ರಧಾನ
ನೇರ ಸರಳ ನಾರದ, ಯಾವ ಸಂಜೆಯಾದರು ಸಿದ್ದ
ಕೆಳೆ ಬಂಧು ಭಾಂದವರೊಡನಿರೆ, ನಂಬಿಕೆ ಭಕ್ತಿ ಶುದ್ಧ || ೦೮ ||
ಮಾಡೆ ಸಾಕು ಪ್ರಸಾದ, ಹಾಲು ಬಾಳೆ ಸಕ್ಕರೆ ತುಪ್ಪ
ಸಮ ಪ್ರಮಾಣದಲಿ ಕಾಯಿಸುತ, ಬೆರೆಸಿದ ಸಮರ್ಪ
ಹಾಡಿ ಹೊಗಳುತ ಭಕ್ತಿಭಜನೆಯಾ ಸುಶ್ರಾವ್ಯದಿರುಳು
ಕಥೆ ಕೇಳಿ ಹಂಚಿ ಪ್ರಸಾದ ಗೌರವದಲಿ ಬೀಳ್ಕೊಡಲು || ೦೯ ||
ಸ್ಥಿತಿ ನಿಯಾಮಕನಿತ್ತ ಪೂಜಾಕ್ರಮ ನಾರದ ಸಂಪ್ರೀತ
ಸರಳ ವ್ರತವದರಲ್ಲಿ ಗಮನ, ಭಕ್ತಿ ಭಜನೆ ಕಥೆಗಳತ್ತ
ಆಲಿಸಲು ಬಯಸಿದ ಯೋಗಿಯಾಸೆಗೆ ನಾರಾಯಣ
ಭಾಗ ವಿಶೇಷಗಳಾಗಿ ಬಿತ್ತರಿಸಿದ ಖಂಡದಲಿಹ ಕಥನ || ೧೦ ||
(ಮುಕ್ತಾಯ : ಅಧ್ಯಾಯ ೦೧)
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
________________________________________
ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೨
________________________________________
ಕೇಳಯ್ಯ ನಾರದ, ವೃದ್ಧ ಕಾಶಿ ಬಡ ಬ್ರಾಹ್ಮಣನ ಕಥೆ
ಸಕಲ ಸದ್ಗುಣ ಸಂಪನ್ನ ಐಶ್ವರ್ಯಹೀನ ಭಿಕ್ಷೆಯೆ ಸ್ವತ್ತೆ
ವಿಪ್ರೋತ್ತಮನ ಪರೀಕ್ಷೆಗೆ ವಿಪ್ರಪ್ರಿಯನಾ ಮಾರುವೇಷ
ಭಕ್ತಿ ಪಥದಲಿಹರೆಲ್ಲ ವಿಪ್ರರೆ, ಹರಿಯಾ ಕರುಣಾಪಾಶ || ೧೧ ||
ಬ್ರಾಹ್ಮಣ ವೇಷದಿ ವಿಪ್ರೋತ್ತಮನ ಬಳಿ ಬಂದಾ ದೇವ
ಗೆಳೆಯ ಹೇಳಯ್ಯಾ, ನಿನದೇನಿದೇ ಪರಿತಾಪ ನೋವ
ಕಡುಬಡವ ವಯಸಾಗಿದೆ, ಕಾಡುವ ಬಡತನ ಬವಣೆ
ಬಿಟ್ಟು ಹೋಗದೀ ಶಾಪವ ತೊಲಗಿಸುವ ಹಾದಿ ಕಾಣೆ || ೧೨ ||
ನಕ್ಕ ಪರಮಾತ್ಮ, ಶ್ರೀ ಸತ್ಯನಾರಾಯಣ ವ್ರತವಿಹುದು
ಮಾಡಿ ನೋಡೊಮ್ಮೆ ನಿನ್ನ, ಸಂಕಷ್ಟಗಳೆಲ್ಲಾ ಹರಿವುದು
ಎಂದುಸುರಿದ ಭಗವಂತ ವ್ರತ ಕ್ರಮ ನಿಯಮಾ ಸೂಕ್ತ
ಇರುಳಿನ ನಿದ್ರೆ ಕನಸಲೂ, ಆ ಚಿಂತೆಯಲೆ ಮಲಗುತ || ೧೩ ||
ಬಾರದ ನಿದ್ರೆಯಲುರುಳಾಡುತ ವಿಪ್ರೋತ್ತಮ ನುಡಿದ
ನಾಳಿನ ಭಿಕ್ಷಾಟನೆ ಗಳಿಸಿದ್ದೆಲ್ಲದಿ ವ್ರತ ನಡೆಸಲು ಸಿದ್ದ
ಲೌಕಿಕದೈಶ್ವರ್ಯಕೊಲಿಯದ ದೇವ, ಭಾವಕೆ ಸಂತೃಪ್ತ
ಭಿಕ್ಷೆಯಲೆ ಮಳೆ ಸುರಿಸಿದ, ವ್ರತಕಿಲ್ಲದ ಹಣದಾ ಕುತ್ತ || ೧೪ ||
ಕೊಂಡು ತಂದ ವ್ರತ ದ್ರವ್ಯ, ಸಾಂಗೋಪದ ಪೂಜೆ ಭವ್ಯ
ನೋಡು ನೋಡುತೇ ಭಲಾ, ಬಡತನ ದಾರಿದ್ರ ಮಾಯ
ಸಂತಸಕೆಣೆಯೆಲ್ಲಿ ಭಾಗ್ಯಕೆ, ಪ್ರತಿ ತಿಂಗಳು ಮಾಡಿ ವ್ರತ
ಪರಮಸುಖ ಸಂತಸ ಜತೆಗೆ, ಮೋಕ್ಷ ಪಡೆದೆ ಸುಖಾಂತ || ೧೫ ||
ಆಲಿಸುತ ಧ್ಯಾನನಿರತ ಶೌನಕಾದಿ ಮುನಿಗಣ ಪುನೀತ
ಕೇಳಲು ಸೂತಪುರಾಣಿಕರ, ಜಗದಿ ಪಸರಿಸಿತ್ಹೇಗೀವ್ರತ
ಪರಿಪಾಲಿಸಿದವರಿಗೆಲ್ಲಾ, ಸಿಕ್ಕಿತೇನೇನು ಭಾಗ್ಯ ಸುಕೃತ
ಸೂತರಿತ್ತರು ವಿವರ, ವಿಪ್ರನಾ ಕಥೆಯಲೆ ಉತ್ತರಿಸುತ್ತ || ೧೬ ||
ವ್ರತನಿರತ ಬ್ರಾಹ್ಮಣ ಗೃಹಕದೊಂದು ದಿನ ಕಟ್ಟಿಗೆಯವ
ಪೂಜಾ ವೈಭವ ಸಂಭ್ರಮಕೆ, ಚಕಿತನಾಗಿ ಕೇಳಿದ ಜಾವ
ಏನೀ ಪೂಜಾ ವ್ರತ ಸ್ವಾಮಿ, ಯಾವುದೀ ಹಣ್ಣೂ ಹಂಫಲ ?
ಮಾಡಿಹೇ ಸತ್ಯನಾರಾಯಣ ವ್ರತ, ಫಲಿತವೀ ಸಂಪತ್ತೆಲ್ಲ || ೧೭ ||
ಯಾರೂ ಮಾಡಬಹುದಾದ ಪೂಜೆ, ಸರಳ ದೈವಿಕ ಶ್ರದ್ಧೆ
ಮನದಾಶೆ ಕಾಮನೆಯೆಲ್ಲ, ಪೂರೈಸೆ ಭಗವಂತನ ಮದ್ದೆ
ನನ್ನ ಬಡತನವೆಲ್ಲ ಮಾಯ, ಲಭಿಸಿ ವ್ರತದಿಂದಾದಾಯ
ಸೇವಿಸು ನೀ ಪ್ರಸಾದ, ಫಲ ಸಿಗಲಿ ನಿನಗು ಪುಣ್ಯಕಾರ್ಯ || ೧೮ ||
ಮರ ಕಡಿವಾ ಮನದೊಳಗೆ, ಕಡಿಯುತ ಚಿಂತನೆಗೆ ಸೌದೆ
ನಾಳಿನ ಸಂಪಾದನೆಯಲ್ಲೆ ನಾ ಮಾಡಿಬಿಡುವೆ ವ್ರತ ಶ್ರದ್ದೆ
ಎಂದವನಾ ಕಟ್ಟಿಗೆ ವ್ಯಾಪಾರವಂದಾಯ್ತು ಭರ ಪೂರದಲಿ
ವ್ರತಪೂಜಾ ಸಲಕರಣೆಯೆಲ್ಲ, ತರಲು ಬಂದ ಲಾಭದಲಿ || ೧೯ ||
ಬಂಧು-ಬಳಗ ನೆಂಟರಿಷ್ಟರೆಲ್ಲರ, ಆಹ್ವಾನಿಸಿ ಪೂಜಾವ್ರತ
ಪೂಜಿಸೆ ಸಾಧಾರಣ ಸೌದೆ ಕಡಿವವಗು, ತಾ ಒಲಿಯುತ
ಕರುಣಿಸಿದನು ಐಶ್ವರ್ಯ, ಸಂಪತ್ಭೋಗದ ಸಿರಿ ಸುರಿಮಳೆ
ಭಕ್ತಿ ವ್ರತನಿರತನಿಗನುಗ್ರಹಿಸಿ,ಸತ್ಯ ಲೋಕಕೊಯ್ದ ಕಹಳೆ || ೨೦ ||
(ಮುಕ್ತಾಯ : ಅಧ್ಯಾಯ ೦೨)
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
___________________________________
ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೩
___________________________________
ಮುಂದುವರೆಸುತ ಸೂತರು ರಾಜನ ಕಥೆ ಉಲ್ಕಮುಖ
ಸತ್ಯವ್ರತ ಪ್ರಜ್ಞಾವಂತ ದಯಾಳು ದೀನದಲಿತ ಸೇವಕ
ಅಸೀಮ ಭಕ್ತ ದಿನಂಪ್ರತಿ ಗುಡಿ ಗೋಪುರ ದೇವಾಲಯ
ಭಗವಂತನಾರಾಧನೆಗೆ ಬಡವಗೆ ದಾನ ಧರ್ಮ ಕಾರ್ಯ || ೨೧ ||
ಅಂತೊಂದು ದಿನ ನದಿ ತೀರದಿ ಸತ್ಯನಾರಾಯಣವ್ರತ
ಮಾಡಿರುವ ಹೊತ್ತಲೆ ಬರಲೊಬ್ಬ ವರ್ತಕ ಶ್ರೇಷ್ಠ ಚಕಿತ
ಕೇಳಲೇನಿದು ಪೂಜಾವ್ರತ, ಏನಿಹುದದು ಪೂಜಾಫಲ
ವಿನಮ್ರದಲೆ ಪೇಳಲು ರಾಜ, ವ್ರತ ನಿಯಮದ ಸರಳ || ೨೨ ||
ನಾ ನಡೆಸಿಹನಯ್ಯಾ ಈ ವ್ರತ ಸಿರಿ ಸಂಪದ ಭಾಗ್ಯಕೆ
ನಿನ್ನ ಹಡಗಂತೆ ಸಮೃದ್ಧ ರಾಜ್ಯವಾಗಿರಲೆಂಬ ಬಯಕೆ
ಶ್ರಿಮನ್ನಾರಾಯಣನಾ ವಿಷ್ಣುವನು ಓಲೈಸುವ ವಿಧಾನ
ಬಯಸಿದ್ದೆಲವ ಒಲಿದರೆ, ಕರುಣಿಸಿ ಮಾಡೇ ಪ್ರಧಾನ || ೨೩ ||
ವರ್ತಕ ಶ್ರೇಷ್ಠಿ ಕುತೂಹಲ, ಕೇಳಲೆ ಪೂಜಾ ವಿಧಾನ
ಸಿರಿಸಂಪದವಿದ್ದೇನು ಫಲ, ಮಕ್ಕಳಿಲ್ಲದೆ ಕೊರಗಿಹನ
ದಯಮಾಡಿ ತಿಳಿಸಯ್ಯಾ ರಾಜ, ಬೇಕಾದ್ದೆಲ್ಲಾ ವಿವರ
ರಾಜನಿತ್ತ ಹರ್ಷದಲೆ, ಪಡೆದು ವರ್ತಕ ಸೇರಿದನೂರ || ೨೪ ||
ಮನೆಯೊಡತಿ ಲೀಲಾವತಿಗ್ಹೇಳುತ ವ್ರತಪೂಜಾಸಾರ
ಮಕ್ಕಳಾಗಲಿ ಮಾಡುವ ಸತ್ಯನಾರಾಯಣವ್ರತ ಪೂರ
ಅನತಿ ಕಾಲದೆ ಗರ್ಭಿಣಿ ಲೀಲಾವತಿ ಹೆತ್ತು ಕಲಾವತಿ
ಪ್ರಾಯಕೆ ಬಂದರೂ ಪೂಜೆಯ ಮರೆತು ಬಿಟ್ಟ ಸಂಗತಿ || ೨೫ ||
ಚಿಂತೇ ಬಿಡು ಲೀಲಾವತಿ, ವ್ರತ ಮಾಡಿ ಮದುವೆ ಜತೆ
ತೀರಿಸಿ ಬಿಡುವ ಹರಕೇ ಬಾಕಿ, ಎಂದವನಾ ಕಕ್ಕುಲತೆ
ಮದುವೆ ನಡೆದೇ ಹೋಯ್ತೆ, ವ್ರತವೇಕೊ ಮರೆತೋಯ್ತೆ
ಭಕ್ತಪ್ರಿಯ ನಾರಾಯಣನೆ, ನೆನಪಿಸಲು ಬರಬೇಕಾಯ್ತೆ || ೨೬ ||
ರತ್ನಸಾರ ಪಟ್ಟಣದಲಿ ರಾಜ್ಯವನಾಳುತ ಚಂದ್ರಕೇತು
ಅಳಿಯನ ಜತೆ ವರ್ತಕ ವ್ಯಾಪಾರಕೆ ಬಂದಿಳಿದಹೊತ್ತು
ಅರಮನೆಯಲಿ ಕದ್ದ ದ್ರವ್ಯ ಹೊತ್ತೋಡಿದ ಕಳ್ಳರ ಬೆನ್ನು
ಹಿಡಿದೋಡಿದ ರಾಜಭಟರ ತಪ್ಪಿಸಿಕೊಳ್ಳಲೆಸೆದ ಹೊನ್ನು || ೨೭ ||
ಮರದ ನೆರಳಡಿ ವಿಶ್ರಮಿಸಿರೆ ವರ್ತಕನೊಡನೆ ಅಳಿಯ
ಬಿತ್ತಲ್ಲ ಕದ್ದೆಸೆದ ಗಂಟು, ಪಕ್ಕದಲೆ ಗ್ರಹಚಾರ ಸಮಯ
ಪರದೇಶಿಗಳ ಕಥೆ ಪ್ರವರ, ಕೇಳುವವರಲ್ಲ ರಾಜಭಟರು
ಕದ್ದ ಮಾಲಿನ ಜತೆಗೆ, ಹೊತ್ತೊಯ್ದು ಸೆರೆಗ್ಹಾಕಿ ಮರೆತರು || ೨೮ ||
ನೆನಸಿಕೊಂಡ ವ್ಯಾಪಾರಿ, ವ್ರತ ಮರೆತೆ ಕಾಡಿಹ ಶ್ರೀಹರಿ
ಕಳ್ಳತನದಿ ಬೀದಿಪಾಲು, ಲೀಲಾವತಿ ಕಲಾವತಿ ಕಮರಿ
ಭಿಕ್ಷೆಯಲಲೆಯುತ ಕಲಾವತಿ ಕಂಡು ನಾರಾಯಣ ವ್ರತ
ತಾಯಿಗ್ಹೇಳಲೆ ವೃತ್ತಾಂತ ಮರೆತಿದ್ದ ವ್ರತದ ನೆನಪಾಯ್ತ || ೨೯ ||
ಮರುದಿನವೆ ಕರೆಯುತ ಬಂಧು ಬಳಗದ ಜತೆಯೆ ವ್ರತ
ಗಲ್ಲ ಬಡಿಯುತ ಕ್ಷಮೆ ಕೇಳುತೆ, ರಾಜನಿಗೆ ಕನಸು ಬಿತ್ತ
ತಪ್ಪರಿವಾಗಿ ವಿಚಾರಿಸೆ, ವರ್ತಕನ ಬಿಡುಗಡೆಗೊಳಿಸುತೆ
ತಪ್ಪಿನ ಬದಲಿಗಪಾರ, ಸಂಪತ್ತ ಹೊರೆ ಹೊರಿಸಿ ಘನತೆ || ೩೦ ||
(ಮುಕ್ತಾಯ : ಅಧ್ಯಾಯ ೦೩)
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
________________________________________
ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೪
________________________________________
ಮುಂದೇನಾಯ್ತೆನಲೆ ಮುನಿಜನ, ಸೂತರೇಳುತ ಕಥನ
ಬಿಡುಗಡೆಯಾದ ಸಂತಸ, ಹಡಗನೇರಿದರಿಬ್ಬರೆ ಜತನ
ಊರ ಬಾಗಿಲಿನ್ಹೊರಗೆ, ಬಂದು ತಲುಪಿದವರ ಪರೀಕ್ಷೆಗೆ
ಬಂದನೆ ಸನ್ಯಾಸಿ ರೂಪದೆ, ಏನಿದೆ ಕೇಳಲ್ಹಡಗಿನೊಳಗೆ || ೩೧ ||
ಬಿಟ್ಟರೂ ಬಿಡದ ಮಾಯೆ, ವರ್ತಕನನು ಬಿಡದ ನೋವೆ
ಅನೃತವನಾಡಿಸಿತು ನಾಲಿಗೆ, ತರಗೆಲೆ ತುಂಬಿದ ನಾವೆ
ನಸುನಕ್ಕ ಭಗವಂತ, ತಥಾಸ್ತು ಎನುತ ನಡೆದ ಸಮಯ
ಎದೆಯೊಡೆದೆ ಪ್ರಜ್ಞಾಶೂನ್ಯ, ವರ್ತಕನಿಗರಿವಾಗಿ ನ್ಯಾಯ || ೩೨ ||
ಓಡಿದ ನಾಗಾಲೋಟ ಸನ್ಯಾಸಿಯ ಊರೆಲ್ಲ ಹುಡುಕುತ
ಕಾಲಿಗೆ ಬಿದ್ದವನೆ, ಕ್ಷಮಿಸಯ್ಯಾ ನನ್ನ ಮೂಢತನ ಧೂರ್ತ
ಕರುಣಾಮಯ ಶ್ರೀಹರಿ, ಕ್ಷಮಿಸಿದನು ಕನಿಕರವಾ ತೋರಿ
ನಿರಾಳದೆ ಮರಳಿದ ವರ್ತಕ, ಸತಿಗೆ ಕಳಿಸೆ ಸುದ್ದಿಸವಾರಿ || ೩೩ |
ಶ್ರೀಸತ್ಯನಾರಾಯಣವ್ರತ ನಿರತೆ, ಕಾಯದ ಸಹನೆ ಕುತ್ತೆ
ಪೂಜೆ ಮುಗಿಸಲು ಕಲಾವತಿಗ್ಹೇಳಿ, ಓಡುತ ಪತಿಗರಸುತೆ
ಗಂಡನನು ಕಾಣುವ ತವಕ, ಅವಸರದಲಿ ಮುಗಿಸಿ ಪೂಜೆ
ಸ್ವೀಕರಿಸದೆ ಪೂಜಾ ಪ್ರಸಾದ, ಓಡಿದಳೆ ಕಲಾವತಿ ಸಹಜೆ || ೩೪ ||
ಬಂದು ನೋಡಿದರಲ್ಲಿ, ಕಾಣದ ನಾವೆ ಪತಿಯ ಸುಳಿವೆಲ್ಲಿ
ಹಾಕಿದ ಲಂಗರೆ ನಾಪತ್ತೆ ಮುಳುಗಿತ್ತೆ ಪತಿಯ ಜತೆಯಲ್ಲಿ
ಬಿಕ್ಕಿ ಆತ್ಮಾಹುತಿಗೆಣೆ ಕಲಾವತಿ, ವರ್ತಕ ಚಿಂತಿತ ಪೂರ್ತಿ
ನಡೆದಿರಬೇಕೇನೊ ತಪ್ಪು, ಮನ ಹುಡುಕಿರೆ ಕಾರಣ ಸರತಿ || ೩೫ ||
ಚಿಂತೆಯ ನಡುವಲೆ ಅಲ್ಲೆ, ವ್ರತ ಮಾಡಲ್ಹೊರಟಾ ವರ್ತಕ
ಅರಿತೊ ಅರಿಯದೆ ಮಾಡಿದ, ತಪ್ಪೆಲ್ಲ ಕ್ಷಮಿಸು ಪ್ರವರ್ತಕ
ವಿಧ ವಿಧದಲಿ ಪ್ರಾರ್ಥನೆ, ಮೊರೆಯಿಡುತಾ ಆರಾಧಿಸಲು
ಭಗವಂತನ ಕರುಣೆಗೆ ಮತ್ತೆ, ಅರಿವಾಯ್ತು ತಪ್ಪಿನ ತಿರುಳು || ೩೬ ||
ಸ್ವೀಕರಿಸಲಿ ಪ್ರಸಾದ ಮೊದಲು, ಪರಿಹಾರವಾಗಿ ದೋಷ
ಸರಿಯಾಗುವುದೆಲ್ಲ ಮತ್ತೆ, ನಾರಾಯಣನೆನಲು ಸುಹರ್ಷ
ವ್ರತ ಪೂಜಾಗೃಹಕೆ ಓಡಿದಳೆ, ಕಲಾವತಿ ಭರದಿ ಪ್ರಸಾದ
ಸ್ವೀಕರಿಸುತ ಪೊಡಮಟ್ಟಲು, ಶ್ರೀಹರಿ ಪರಿಹರಿಸಿ ವಿಷಾದ || ೩೭ ||
ನಿಜ ಭಕ್ತಿಯಲಿ ಎರಗಿ ಸುಕೋಮಲೆ, ಶ್ರೀಹರಿ ಕೃಪೆಮಾಲೆ
ಕಳುವಾದ ಪತಿಯು ಹಿಂದಿರುಗಿರಲೆ, ನಾರಾಯಣ ಲೀಲೆ
ಸಂತಸ ಭರದಲಿ ವೃದ್ಧಿ, ಭಗವಂತನ ಮೇಲಣ ಭಯಭಕ್ತಿ
ಸುಖಸಂತೋಷವ ಹೊಂದೆ, ಜೀವನವಿಡಿ ವ್ರತಮಾಡಿ ಶಕ್ತಿ || ೩೮ ||
ಆಂತು ಮಂಗಳಕರವಾಗೆ, ಲೀಲಾವತಿ ಕಲಾವತಿ ಪ್ರವರ
ಅಲಕ್ಷಿಸದೆ ಮಾಡೆ ಶ್ರೀಸತ್ಯನಾರಾಯಣ ವ್ರತ ಪರಿಹಾರ
ಕಷ್ಟ ನಷ್ಟಗಳೆಲ್ಲಾ ಕರಗಿ, ಸುಖಸಂತೋಷ ಸಮೃದ್ಧಿಯಲೆ
ಪಡೆಯಲು ಕೈವಲ್ಯ ಮುಕ್ತಿ, ಐಹಿಕ ಜೀವನ ಕಳೆದಮೇಲೆ || ೩೯ ||
(ಮುಕ್ತಾಯ: ಅಧ್ಯಾಯ – ೦೪)
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
________________________________________
ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೫
________________________________________
ನೇಮಿಷಾರಣ್ಯ ಕಾನನದಿ ಸೂತರು ಮುಂದುವರೆಸುತಲಿ
ಶೌನಕಾದಿ ಮುನಿಗಳಿಗೆ ಅರುಹೆ, ಐದನೆ ಅಧ್ಯಾಯದಲಿ
ಬಲು ಮುಖ್ಯವೀ ಭಾಗದ ಕಥೆ, ನಾವಾಗಬಾರದು ಅಂತೆ
ಕೇಳಿ ಧನ್ಯರಾಗುವ ಸರದಿ, ಶ್ರೀಮನ್ನಾರಾಯಣ ಭಕ್ತಿ ಕಥೆ || ೪೦ ||
ಪೂರ್ವದಲಿ ರಾಜ್ಯವಾಳುತ, ಅಂಗಧ್ವಜನೆಂಬೊಬ್ಬ ರಾಜ
ಸರ್ವೋತ್ತಮ, ಸತ್ಯ ನಿಷ್ಠುರ ಪರಿಪಾಲಿಸುತಿರಲೆ ಸಹಜ
ಯಾರನು ಬಿಟ್ಟೀತೊ ಮಾಯೆ, ಸತ್ಯನಾರಾಯಣ ವ್ರತದ
ಅಲಕ್ಷಿಸಲೊಮ್ಮೆ ಪ್ರಸಾದ, ಸಂಕಷ್ಟಗಳ ಬಾಗಿಲಾ ತೆರೆದ || ೪೧ ||
ಬೇಟೆಯಾಡುತ ಕಾಡಿನಲಿ, ವನ್ಯಮೃಗಗಳ ಬೆನ್ನಟ್ಟುತಲಿ
ದಣಿದ ರಾಜ ವಿಶ್ರಮಿಸೆ, ಕೂಡೆ ಮರದ ನೆರಳೊಂದರಲಿ
ಅನತಿ ದೂರದಲೆ ಆಡಿಕೊಂಡಿದ್ದ ಬಾಲರ ಕಲರವದಲಿ
ಆಡಿದ್ದರಾಟ ಸತ್ಯನಾರಾಯಣ ಪೂಜೆ ಮಾಡೆ ಆಟದಲಿ || ೪೨ ||
ತುಂಡು ರೊಟ್ಟಿ ಹೊರತು, ಬೇರೇನಿಲ್ಲ ಕಿರಿಯರ ಬಳಗ
ಆರಿಸಿಕೊಂಡರು ತಮ್ಮಲೊಬ್ಬನಿಗಿತ್ತೆ ಪುರೋಹಿತ ಜಾಗ
ದನ ಕಾಯುವವರ ಬುತ್ತಿ, ಆಟದಲೆ ಸಹಜ ಬಾಲಭಕ್ತಿ
ತೋಚಿದಂತೆ ಮಾಡಿರಲು ಪೂಜೆ, ಸತ್ಯನಾರಾಯಣಶಕ್ತಿ || ೪೩ ||
ಅಟದ ಪೂಜೆಯಲಿ ನೈವೇದ್ಯ, ಬುತ್ತಿಯನೆ ಅರ್ಪಿಸಿದ
ದನಗಾಹಿ ಬಾಲರು ರಾಜನಿಗರ್ಪಿಸಲು ವ್ರತ ಪ್ರಸಾದ
ಹಮ್ಮು, ಬಿಗುಮಾನ, ಗರ್ವ ಕಾಡಿರಲು ಮಲಿನಾ ಮನ
ಮುಟ್ಟದೆ ನಡೆದನೆ ಪ್ರಸಾದ, ಆಗದಿಹುದೇ ಪ್ರತಿಫಲನ ?|| ೪೪ ||
ನೋಡು ನೋಡುತೆ ಅಂಗಧ್ವಜ, ಕಳುವಾಗಿ ಹೋಯ್ತೆಲ್ಲ
ಕಳೆದುಕೊಂಡ ಐಶ್ವರ್ಯದ ಜತೆಗೆ, ನೂರು ಮಕ್ಕಳಿನ್ನಿಲ್ಲ
ಆಲೋಚಿಸುತ ಸಜ್ಜನ ರಾಜ, ಅರಿತ ಪ್ರಸಾದದ ಶಾಪ
ನಿರ್ಲಕ್ಷಿಸಿದ ಪಾಪವೆ, ಕಾಡಿದೆ ಈ ತರದಲಿ ನಿಜರೂಪ || ೪೫ ||
ತಡಮಾಡದೆ ಅಂಗಧ್ವಜ, ಹೊರಟ ದನಗಾಹಿ ತಾಣಕೆ
ಸೇರಿಸಲದೆ ಬಾಲರ, ಮಾಡಿ ವ್ರತ ಶ್ರದ್ದಾ ಭಕ್ತಿ ಬೆಳಕೆ
ಮನ್ನಿಸಿದ ಶ್ರೀಹರಿ, ಮತ್ತೆ ಕರುಣಿಸುತ ಕಳೆದ ಸಂಪತ್ತು
ಇನ್ನಿಲ್ಲವಾದ ಬಂಧುಗಳೆಲ್ಲಾ ಮತ್ತೆ ಕೈ ಸೇರಿದ ಹೊತ್ತು || ೪೬ ||
ಸೂತರೆಂದರು ಕಥೆ ಮುಗಿಸುತ, ಕಲಿಯುಗಕಿದು ಸೂಕ್ತ
ವಿಶೇಷ ಶಕ್ತಿಯಿಹ ಈ ವ್ರತ, ಕರುಣಿಸಬಲ್ಲ ಅಪರಿಮಿತ
ಪವಿತ್ರ ಪುನೀತ ದೇವರ ದೇವನ, ಹೆಸರಾಗಿಹ ಅನಂತ
ಈಶ್ವರ, ಸತ್ಯದೇವ, ನಾರಾಯಣಾದಿ ರೂಪದ ಅದ್ವೈತ || ೪೭ ||
ಅವತರಿಸಿಹ ಹಲವವತಾರ, ಬಗೆ ರೂಪಗಳಲಿ ಒಬ್ಬನೆ
ಈ ಕಥೆ ಕೇಳಿ ಓದಿದೆಲ್ಲರಿಗು, ಸನ್ಮಂಗಳವ ತೋರುವನೆ
ಪರಿಹರಿಸುವನವರೆಲ್ಲರ ದುಃಖ ಸಂಕಷ್ಟಗಳ ಸರಮಾಲೆ
ಶ್ರೀ ಸತ್ಯನಾರಾಯಣ ವ್ರತದೆ, ಇಹಪರ ಸುಖ ಮುಟ್ಟಲೆ || ೪೮ ||
(ಮುಕ್ತಾಯ: ಅಧ್ಯಾಯ – ೦೫)
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
___________________
ಕಾವ್ಯರೂಪ : ನಾಗೇಶ ಮೈಸೂರು
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ